ರಾಮಕೃಷ್ಣ ಹೆಗಡೆ
(1927-). ಕರ್ನಾಟಕದ ಹಿರಿಯ ರಾಜಕಾರಣಿ, ರಾಜಕೀಯ ಮುತ್ಸದ್ದಿ ಹಲವು ವರ್ಷಗಳ ಕಾಲ ಕರ್ನಾಟಕದ ಮಂತ್ರಿಯಾಗಿಯೂ ಮುಖ್ಯಮಂತ್ರಿಯಾಗಿಯೂ ಅನುಭವಗಳಿಸಿದವರು. ಭಾರತ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದರು (1998).

ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ದೊಡ್ಮನೆಯ ರೈತ ಕುಟುಂಬದಲ್ಲಿ 1927ರ ಆಗಸ್ಟ್ 29 ರಂದು ಜನಿಸಿದರು. ತಂದೆ ಮಹಾಬಲೇಶ್ವರ, ತಾಯಿ ಸರಸ್ವತಿ, ಪತ್ನಿ ಶಕುಂತಲಾ ಇವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು. ಇವರು ಉನ್ನತ ಶಿಕ್ಷಣ ಪಡೆದುದು ಉತ್ತರ ಪ್ರದೇಶದ ಕಾಶಿ ವಿದ್ಯಾಪೀಠದಲ್ಲಿ, ಇವರು ಎಂ.ಎ.,ಎಲ್.ಎಲ್.ಬಿ. ಪಧವೀದರರು.
ವಿಶಿಷ್ಟಶೈಲಿಯ, ನವುರಾದ ವರ್ತನೆಯಲ್ಲಿ ಪರಿಣಿತರಾದ ಇವರು ಚಾಣಾಕ್ಷ ರಾಜಕಾರಣಿಯೆಂದೇ ಹೆಸರಾಗಿದ್ದರು. ರೀತಿ ನೀತಿಗಳಿಂದಾಗಿ ಬಲು ತೀವ್ರವಾದ ಪ್ರತಿಕ್ರಿಯೆಗಳಿಗೆ ಇವರು ಅವಕಾಶ ಮಾಡಿಕೊಡುತ್ತಾರೆಂಬುದು ಹಲವರ ಅಭಿಪ್ರಾಯ. ತಮ್ಮ ದೀರ್ಘ ರಾಜಕೀಯ ಯಾತ್ರೆಯಲ್ಲಿ ತೀವ್ರವಾಗಿ ಪ್ರೀತಿಸುವ ಉತ್ಕಟ ಅಭಿಮಾನಿಗಳನ್ನೂ ಪ್ರತಿರೋಧ ವ್ಯಕ್ತಪಡಿಸುವ ಉಗ್ರ ವಿರೋಧಿಗಳನ್ನೂ ಸಂಪಾದಿಸಿಕೊಂಡಿದ್ದಾರೆಂದು ಅನೇಕರು ಹೇಳುವುದುಂಟು.

ರಾಮಕೃಷ್ಣ ಹೆಗಡೆಯವರು ಜನಜಂಗುಳಿಯ ಮಟ್ಟದಿಂದ ಮೇಲೇರಿ ಬಂದ ಉತ್ತಮ ಸಂಘಟಕರೆಂದು ಹೆಸರುಗಳಿಸಿದವರು. ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತನಾಗಿ. ಕ್ರಮ ಕ್ರಮವಾಗಿ ವಿವಿಧ ಹಂತಗಳಲ್ಲಿ ಇವರು ಅನುಭವ ಸಂಪಾದಿಸಿಕೊಂಡರು. ಇವರು ಅಖಿಲ ಕರ್ನಾಟಕ ವ್ಯಾಪ್ತಿಯ ಕೀರ್ತಿಗಳಿಸಿದ್ದು 1957ರಲ್ಲಿ ನೂತನವಾಗಿ ಸ್ಥಾಪಿತವಾದ ಕರ್ನಾಟಕ ರಾಜ್ಯದ ವಿಧಾನಸಭೆಗೆ ಆಯ್ಕೆಯಾದಾಗ. ಆಗ ಇವರಿಗೆ ಕೇವಲ ಮೂವತ್ತು ವರ್ಷ. ಈ ಉತ್ಸಾಹಿ ಯುವಕ ಆಗ ಕರ್ನಾಟಕದ ಹಿರಿಯ ಮುತ್ಸದ್ದಿ ಸಿದ್ಧವನಹಳ್ಳಿ ನಿಜಲಿಂಗಪ್ಪನವರ ಗಮನ ಸೆಳೆದರು. ನಿಜಲಿಂಗಪ್ಪನವರ ಸರ್ಕಾರದಲ್ಲಿ ಯೋಜನೆ ಮತ್ತು ಅಭಿವೃದ್ಧಿಯ ಉಪಮಂತ್ರಿಯಾಗಿ ನೇಮಕಗೊಂಡರು. ನಿಜಲಿಂಗಪ್ಪನವರ ಸರ್ಕಾರದಲ್ಲಿ ಮಂತ್ರಿಯಾದ ಇನ್ನೊಬ್ಬರು ವೀರೇಂದ್ರ ಪಾಟೀಲರು ಹೆಗಡೆಯವರಿಗಿಂತ ಹಿರಿಯರು. ಇವರಿಬ್ಬರೂ ನಿಜಲಿಂಗಪ್ಪನವರ ವಿಶೇಷವಾದ ನಂಬಿಕೆಗೆ ಪಾತ್ರರಾಗಿ ಅವರ ಎಡಗೈ ಬಲಗೈಗಳಂತೆ ಕೆಲಸಮಾಡುತ್ತಿದ್ದರು. ಕರ್ನಾಟಕದ ರಾಜಕೀಯದಲ್ಲಿ ಲವಕುಶರೆಂದೇ ಹಲವರು ಇವರನ್ನು ಕರೆಯುತ್ತಿದ್ದುದುಂಟು.

ಹೆಗಡೆಯವರ ಶ್ರದ್ಧೆ, ದಕ್ಷತೆ, ಚಾಣಾಕ್ಷತೆಗಳಿಗೆ ಬಲು ಬೇಗ ಯಶಸ್ಸು ದೊರಕಿತು. ಇವರು ಸಂಪುಟದರ್ಜೆಯ ಮಂತ್ರಿಯಾಗಿ (1962 - 65) ಅಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಸಹಕಾರ ಖಾತೆಗಳನ್ನು ನಿರ್ವಹಿಸಿದವರು. ಮುಂದೆ ಹಣಕಾಸು, ಅಬಕಾರಿ, ಪಾನ ನಿರೋಧ ವಾರ್ತಾ ಮತ್ತು ಪ್ರಚಾರಯೋಜನೆ ಯುವಜನ ಕಲ್ಯಾಣ ಮಂತ್ರಿಯಾಗಿ (ಬೇರೆ ಬೇರೆ ಅವಧಿಗಳಲ್ಲಿ) ಸೇವೆ ಸಲ್ಲಿಸಿದರು (1965 - 71).

ಈ ನಡುವೆ ಕಾಂಗ್ರೆಸ್ ಒಡೆದು ಎರಡು ಹೋಳಾಗಿತ್ತು. ಇಂದಿರಾಗಾಂಧಿಯವರ ಆಳುವ ಕಾಂಗ್ರೆಸ್ ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಸಂಸ್ಥಾ ಕಾಂಗ್ರೆಸ್ ಇನ್ನೊಂದು ಹೋಳು. ನಿಜಲಿಂಗಪ್ಪನವರಲ್ಲಿ ನಿಷ್ಠೆ ಹೊಂದಿದ್ದ ಹೆಗಡೆಯವರು ಸಂಸ್ಥಾ ಕಾಂಗ್ರೆಸ್ಸಿನಲ್ಲಿ ಮುಂದುವರಿದರು. ಪಕ್ಷದ ಮಹಾಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದರು. ಸಂಸ್ಥಾ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲನ್ನು ಅನುಭವಿಸಿದಾಗ ಇವರು ರಾಜ್ಯದ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾದರು.

ಇಂದಿರಾಗಾಂಧಿಯವರ ಸರ್ಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ (1975) ವಿರೋಧಪಕ್ಷಗಳ ಇತರ ಹಲವರಂತೆ ಹೆಗಡೆಯವರೂ ಸ್ಥಾನಬದ್ಧತೆಯನ್ನು ಅನುಭವಿಸಬೇಕಾಯಿತು. ಬಂಧನದಿಂದ ಹೊರಬಂದ ಮೇಲೆ ಇವರು ಬದಲಾದ ವ್ಯಕ್ತಿಯಾದರೆಂದು ಹಲವರು ಭಾವಿಸುತ್ತಾರೆ. ಇವರ ವಿನೋದ ಪ್ರವೃತ್ತಿ ಕಡಿಮೆಯಾಗಿ, ಗಾಂಭೀರ್ಯ ಹೆಚ್ಚಿತೆಂದೂ ಇವರ ಶೈಲಿ ಹೆಚ್ಚು ದೃಢವೂ ಗಟ್ಟಿಯೂ ಆಯಿತೆಂದು ಹಲವರ ಅನಿಸಿಕೆ.

ತುರ್ತುಪರಿಸ್ಥಿತಿ ಕೊನೆಗೊಂಡು ಚುನಾವಣೆ ನಡೆದಾಗ (1977) ಕೇಂದ್ರದಲ್ಲಿ ಜನತಾಪಕ್ಷದ ಸರ್ಕಾರ ಸ್ಥಾಪಿತವಾಯಿತು. ಪಕ್ಷದ ವಿವೇಕಯುತ ನಾಯಕರಲ್ಲೊಬ್ಬರೆಂದು ಇವರು ಪರಿಗಣಿತರಾದರು. ಜನತಾ ಪಕ್ಷದ ಅಖಿಲ ಭಾರತ ಮಟ್ಟದ ಮಹಾಕಾರ್ಯದರ್ಶಿಯಾಗಿ ನೇಮಕಗೊಂಡರು. ಪಕ್ಷದ ಅಧಿಕೃತ ವಕ್ತಾರರಾಗಿ ತಮ್ಮ ಚುರುಕಾದ ಮಾತಿನಿಂದ, ವ್ಯಂಗ್ಯ ವಿಡಂಬನೆ, ನಗೆ ಚಟಾಕಿಗಳಿಂದ ಹೆಚ್ಚಿನ ಜನಪ್ರಿಯತೆಗಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಈ ವ್ಯಕ್ತಿ ಅಖಿಲ ಭಾರತದಲ್ಲಿ ಹಲವು ಮಿತ್ರರನ್ನೂ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ರಾಜಕಾರಣವೇ ಅಲ್ಲದೆ ಜೀವನದ ಇತರ ಕ್ಷೇತ್ರಗಳಿಗೂ ಇವರ ಸ್ನೇಹವಲಯ ವಿಸ್ತರಿಸಿತು.

ಬಹುಕಾಲ ಕರ್ನಾಟಕ ರಾಜ್ಯದಿಂದ ಹೊರಗಡೆಯೇ ಅಖಿಲ ಭಾರತರಾಜಕೀಯದಲ್ಲಿ ಮುಳುಗೇಳುತ್ತಿದ್ದ ರಾಮಕೃಷ್ಣ ಹೆಗಡೆ 1983ರಲ್ಲಿ ಹಠಾತ್ತನೆ ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಮರಳಿದರು. ಆ ವರ್ಷ ನಡೆದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತು. ಕೇಂದ್ರದಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. 1993 ಜನವರಿ 10 ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಮುಖ್ಯಮಂತ್ರಿಯಾದಂದಿನಿಂದಲೂ ಅಧಿಕಾರದಲ್ಲಿ ಉಳಿಯಲು ಇವರು ನಿರಂತರವಾಗಿ ಸೆಣಸಾಟ ನಡೆಸಬೇಕಾಗಿಬಂತು. ಇವರ ಅಲ್ಪಸಂಖ್ಯಾತ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಎಡೆಬಿಡದೆ ಶ್ರಮಿಸುತ್ತಿತ್ತು. ಬಿಜೆಪಿ, ಕಮ್ಯೂನಿಸ್ಟರು ಮತ್ತು ಪಕ್ಷೇತರ ಸದಸ್ಯರ ನೆರವಿನಿಂದ ಇವರು ಆಡಳಿತ ನಡೆಸಿದರು. 

1984ರಲ್ಲಿ ಲೋಕಸಭೆ ನಡೆದ ಚುನಾವಣೆಯಲ್ಲಿ ಇವರ ಪಕ್ಷ ರಾಜ್ಯದಿಂದ ಕೇವಲ ನಾಲ್ಕು ಸ್ಥಾನಗಳನ್ನು ಗಳಿಸಿತು. ಹೆಗಡೆಯವರ ಸರ್ಕಾರ ಜನಪ್ರಿಯತೆಯನ್ನು ಕಳೆದುಕೊಂಡಿರುವುದರಿಂದ ರಾಜೀಮಾಮೆ ಕೊಡಬೇಕೆಂದು ಕಾಂಗ್ರೆಸ್ ಪ್ರಚಾರ ನಡೆಸಿತ್ತು. ಹೆಗಡೆಯವರು ಈ ವಾದವನ್ನು ಒಪ್ಪಲಿಲ್ಲ. ಆದರೂ ಕೊನೆಗೆ 1984 ಡಿಸೆಂಬರ್ 29 ರಂದು ರಾಜೀನಾಮೆ ನೀಡಿ, ವಿಧಾನ ಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಬೇಕೆಂದು ರಾಜ್ಯಪಾಲರಿಗೆ ಕೋರಿಕೆ ಸಲ್ಲಿಸಿದರು. ತಮ್ಮ ಪಕ್ಷದ ಜನಪ್ರಿಯತೆಯನ್ನು ಸಾಬೀತುಗೊಳಿಸುವುದಾಗಿ ಹೇಳಿದರು. 1985ರ ಮಾರ್ಚ್ 5 ರಂದು ನಡೆದ ಚುನಾವಣೆಯಲ್ಲಿ ಇವರ ಪಕ್ಷಕ್ಕೆ ಪ್ರಚಂಡ ಜನ ಲಭಿಸಿತು. ಅದು ಮೂರನೆಯ ಎರಡರಷ್ಟು ಬಹುಮತಗಳಿಸಿತು. 

ಆದರೆ ಬಹುಕಾಲ ಇವರ ಅಧಿಕಾರ ಮುಂದುವರಿಯಲಿಲ್ಲ. ಸಾರಾಯಿಯನ್ನು ಸೀಸೆಗೆ ತುಂಬಿ ಮಾರಾಟ ಮಾಡಲು ಇವರು ಅನುಮತಿ ನೀಡಿ ಮಾಡಿಕೊಂಡಿದ್ದ ಕಾರಾರು ಅನೂರ್ಜಿತವೆಂದು ಉಚ್ಚನ್ಯಾಯಾಲಯ ಅದನ್ನು ತಳ್ಳಿಹಾಕಿತು. ನೈತಿಕ ಹೊಣೆ ಹೊತ್ತು ಹೆಗಡೆಯವರು ಹಠಾತ್ತನೆ ರಾಜೀನಾಮೆ ನೀಡಿದರು. ಇಚ್ಛೆಗೆ ತಲೆಬಾಗಿ ಇವರು ಮತ್ತೆ ವಿಧಾನಸೌಧಕ್ಕೆ ಹಿಂದಿರುಗಿದರು. 1986 ಫೆಬ್ರವರಿ 16 ರಂದು ಪುನಃ ಮುಖ್ಯಮಂತ್ರಿಯಾಗಿ ಪ್ರತಿe್ಞÁವಚನ ಸ್ವೀಕರಿಸಿದರು. 

ಅಲ್ಪಮತ ಸರ್ಕಾರದ ಅಧಿಪತಿಯಾಗಿದ್ದೂ ತಮ್ಮ ಚತುರೋೀಪಾಯಗಳಿಂದ ಸರ್ಕಾರವನ್ನು ಉಳಿಸಿಕೊಂಡು, ಚುನಾವಣೆ ನಡೆಸಿ ಬಹುಮತಗಳಿಸಿ ಗೆದ್ದು ಬಂದ ಹೆಗಡೆ ಚಾಣಾಕ್ಷರಾಜಕಾರಣಿ ಎಂಬ ಹೆಸರು ಗಳಿಸಿಕೊಂಡರು. ತಮ್ಮದು ಮೌಲ್ಯಾಧಾರಿತ ರಾಜಕಾರಣವೆಂದೂ ಇವರು ಹೇಳಿಕೊಳ್ಳುತ್ತಿದ್ದರು. ಸಾರಾಯಿ ಸೀಸೆ ಹಗರಣದಲ್ಲಿ ನ್ಯಾಯಾಲಯದ ತೀರ್ಪಿನಿಂದಾಗಿ ಇವರ ಮೌಲ್ಯ ಪ್ರತಿಪಾದನೆಗೆ ಕಳಂಕ ಹತ್ತಿದೆಯೆಂದು ವಿರೋಧಿಗಳು ವಾದಿಸಿದರು. ಆದರೂ ಹೆಗಡೆಯವರು ಏಕಾಂಗ ವೀರನಂತೆ ಹೋರಾಡಿದರು. ರಾಜ್ಯದಲ್ಲಿ ವಿರೋಧಿಗಳ ಟೀಕೆಗಳಿಗೆ ಉತ್ತರಿಸುತ್ತ, ಕೇಂದ್ರ ಸರ್ಕಾರಕ್ಕೆ ವಿರುದ್ಧವಾಗಿ ರಾಜ್ಯಗಳಿಗೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಯಿತು. ರಾಜ್ಯದ ಹಣಕಾಸು ಮಂತ್ರಿಯೂ ಆಗಿದ್ದ ಇವರು ಕಟುಟೀಕೆಗೆ ಗುರಿಯಾದರು. ರಾಜ್ಯದಲ್ಲಿ ನಾಲ್ಕು ವರ್ಷ ಸತತವಾಗಿ ಅನಾವೃಷ್ಟಿಯಾದ್ದರಿಂದ ಪರಿಸ್ಥಿತಿ ತುಂಬ ಬೆಳೆದುವು. ದೂರವಾಣಿ ಕದ್ದಾಲಿಕೆಯ ಆರೋಪ ತೀವ್ರವಾಗಿ, ಕೊನೆಗೆ ಹೆಗಡೆ ಅವರು ರಾಜೀನಾಮೆ ನೀಡಿಹೊರಬಂದರು (1989). ಎಸ್. ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಹೆಗಡೆಯವರ ತೀವ್ರ ಪ್ರತಿಸ್ಪರ್ಧಿಯಾದ ಎಚ್. ಡಿ. ದೇವೇಗೌಡರು ವಿರೋಧಿ ಪಾಳಯಕ್ಕೆ ಸೇರಿಕೊಂಡಿದ್ದರು.

ಈ ಒಳಜಗಳದ ಫಲವಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಮಕೃಷ್ಣ ಹೆಗಡೆಯವರು ಅಖಿಲಭಾರತ ಪ್ರವಾಸ ಕೈಗೊಂಡು ಭಾಷಣಗಳನ್ನು ನೀಡುತ್ತ ಜನಮನದಲ್ಲಿ ಉಳಿದುಕೊಳ್ಳಲು ಯತ್ನನಡೆಸಿದರು. ಇವರು ಕೆಲಕಾಲ ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಮತ್ತೆ ಜನಪ್ರಿಯತೆ ಕಳೆದುಕೊಳ್ಳುವ ಸೂಚನೆಗಳು ಕಂಡುಬಂದಾಗಿ ಜನತಾದಳಕ್ಕೆ ಮತ್ತೆ ಅಧಿಕಾರ ದೊರಕಿಸಿಕೊಡುವ ಅವಕಾಶ ಪ್ರಾಪ್ತವಾಯಿತು. ಎಚ್. ಡಿ. ದೇವೇಗೌಡರು. ರಾಮಕೃಷ್ಣ ಹೆಗಡೆಯವರೂ ಮತ್ತೆ ಒಂದಾಗಿ ಸೇರಿದರು. ರಾಜ್ಯದಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದರು 1994ರ ಚುನಾವಣೆಯಲ್ಲಿ ಮತ್ತೆ ಜನತಾದಳಕ್ಕೆ ಜಯದೊರಕಿತು. ತಾವೂ ಒಬ್ಬ ಅಭ್ಯರ್ಥಿಯಾಗುವ ಯೋಚನೆಯನ್ನು ಹೆಗಡೆಯವರು ಕೊನೆಗಳಿಗೆಯಲ್ಲಿ ಬಿಟ್ಟುಕೊಟ್ಟಿದ್ದರು. ಸರ್ಕಾರವನ್ನು ಯಾರು ರಚಿಸುವರೆಂಬ ಬಗ್ಗೆ ಸ್ವಲ್ಪ ಕಾಲ ಅನಿಶ್ಚಿತತೆ ಉಂಟಾಯಿತು. ವಿರಸ ಪ್ರಸಂಗ ಮುಂದುವರಿಯಿತು. ಕೊನೆಗೆ ಎಚ್. ಡಿ. ದೇವೇಗೌಡರೇ ಮುಖ್ಯಮಂತ್ರಿಯಾದರು. ರಾಮಕೃಷ್ಣ ಹೆಗಡೆ ದೂರಸರಿಯಬೇಕಾಯಿತು.

ಎಚ್. ಡಿ. ದೇವೇಗೌಡರು ಅನಿರೀಕ್ಷಿತವಾಗಿ ಕೇಂದ್ರದಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಾಗಿ ಬಂದಾಗ ರಾಜ್ಯದಲ್ಲಿ ತೆರವಾದ ಸ್ಥಾನದಲ್ಲಿ ಯಾರು ಮುಖ್ಯಮಂತ್ರಿಯಾಗಬೇಕೆಂಬ ಪ್ರಶ್ನೆ ಮತ್ತೆ ಪ್ರಧಾನವಾಯಿತು. ಹೆಗಡೆಯವರು ಜೆ. ಎಚ್. ಪಟೇಲರನ್ನು ಬೆಂಬಲಿಸಿದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಆದರೆ ವಿರಸ ವಾತವರಣ ಮುಂದುವರಿಯಿತು. ರಾಮಕೃಷ್ಣ ಹೆಗಡೆಯವರು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆಂಬ ಆರೋಪದ ಮೇಲೆ ಆಗಿನ ಅಖಿಲ ಭಾರತ ಜನತಾದಳದ ಅಧ್ಯಕ್ಷರು ಇವರನ್ನು ಪಕ್ಷದಿಂದ ಹೊರಹಾಕಿದರು. ರಾಷ್ಟ್ರೀಯ ನವನಿರ್ಮಾಣ ವೇದಿಕೆ ಎಂಬ ರಾಜಕೀಯೇತರ ಸಂಘಟನೆಯನ್ನು ಹೆಗಡೆ ಸ್ಥಾಪಿಸಿದರು ರಾಜ್ಯದಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡರು. ಅನಂತರ ರಾಮಕೃಷ್ಣ ಹೆಗಡೆ ತಮ್ಮದೇ ಆದ ಲೋಕಶಕ್ತಿಯನ್ನು ಸ್ಥಾಪಿಸಿದರು. 1998ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದರು. ಅನಂತರ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಅದರಲ್ಲಿ ವಾಣಿಜ್ಯ ಸಚಿವರಾಗಿದ್ದರು.                         
 (ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ